ಬರ್ಟಿನ್, ರಾಬಟ್
	1577-1640. ಇಂಗ್ಲಿಷ್ ಲೇಖಕ. ವೃತ್ತಿಯಿಂದ ಪಾದ್ರಿ. ಒಲವಿನಿಂದ ವೈದ್ಯ. ಜೀವನದ ವಿರಾಮಕಾಲವನ್ನೆಲ್ಲ ಪುಸ್ತಕಗಳ ಮಧ್ಯೆ ಕಳೆದ. ಇವನ ಅನಾಟಮಿ ಅಫ್ ಮೆಲಂಕಲೀ (1621) ಇವನ ವಿದ್ವತ್ತು ಮತ್ತು ವಿಲಕ್ಷಣ ಸ್ವಭಾವಗಳಿಗೆ ಕನ್ನಡಿಯಂತಿದೆ. ಮರೆತು ಹೋಗಿದ್ದ ಇವನನ್ನು ಚಾರಲ್ಸ್ ಲ್ಯಾಮ್ ಮತ್ತೆ ಬೆಳಕಿಗೆ ತಂದುದು ಸಹಜವೆಂದೇ ತೋರುತ್ತದೆ. ಲ್ಯಾಟಿನಿನಲ್ಲಿ ಬರೆಯಬೇಕೆಂಬ ಹಂಬಲವಿದ್ದರೂ ಪ್ರಕಾಶಕರ ಒತ್ತಾಯದಿಂದ ಈತ ಅಂದಿಗೆ ಕೀಳುಭಾಷೆ ಎನಿಸಿದ್ದ ಇಂಗ್ಲಿಷಿನಲ್ಲೇ ಬರೆದ.

	ಅನಾಟಮಿ ಅಫ್ ಮೆಲಂಕಲಿ ಎಂಬ ಪುಸ್ತಕ ವಿಷಣ್ಣತೆ ಎಂಬ ರೋಗದ ಕಾರಣಗಳು, ವಿವರಗಳು ಮತ್ತು ನಿವಾರಣೋಪಾಯವನ್ನು ವಿಶದವಾಗಿ ತಿಳಿಸುತ್ತದೆ. ಅಲ್ಲದೆ ಪ್ರಣಯದ ವಿಷಣ್ಣತೆ ಮತ್ತು ಧಾರ್ಮಿಕ ವಿಷಣ್ಣತೆಗಳನ್ನು ವಿವರಿಸುತ್ತದೆ. ಈ ಗ್ರಂಥದಲ್ಲಿ ಇನ್ನೂ ಅನೇಕಾನೇಕ ವಿಷಯಗಳು ಅಡಕವಾಗಿವೆ.
(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ